Psalms 45

ರಾಜನ ವಿವಾಹದ ವರ್ಣನೆ

1 ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋಶನ್ನೀಮ್ ಎಂಬ ರಾಗದ ಮೇಲೆ ಹಾಡತಕ್ಕದ್ದು; ಕೋರಹೀಯರ ಪದ್ಯ; ಪ್ರೇಮಗೀತೆ.

(ಯೆಶಾ. 61:10—62:5)

1ಒಂದು ದಿವ್ಯ ವಿಷಯವನ್ನು ಹೇಳುವುದಕ್ಕೆ ನನ್ನ ಹೃದಯವು ತವಕಪಡುತ್ತದೆ;
ನಾನು ರಾಜನನ್ನು ಕುರಿತು ಈ ಪದ್ಯವನ್ನು ರಚಿಸುವೆನು.
ನನ್ನ ನಾಲಿಗೆಯು ಒಳ್ಳೆಯ ಬರಹಗಾರನ ಲೇಖನಿಯಂತೆ ಸಿದ್ಧವಾಗಿದೆ.
2 ನೀನು ಎಲ್ಲಾ ಮನುಷ್ಯರಿಗಿಂತ ಅತಿಸುಂದರನು;
ನಿನ್ನ ಮಾತುಗಳು ಬಹು ಮಧುರ;
ಇದರಿಂದಲೇ ದೈವಾನುಗ್ರಹವು ಯಾವಾಗಲೂ ನಿನ್ನ ಮೇಲಿದೆ ಎಂಬುದು ಸ್ವಷ್ಟವಾಗುತ್ತದೆ.

3

ಶೂರನೇ, ಮಹಿಮೆ ಮತ್ತು ಪ್ರಭಾವನ್ನು ಧರಿಸಿಕೊಂಡು,

ಸೊಂಟಕ್ಕೆ ಪಟ್ಟದ ಕತ್ತಿಯನ್ನು ಕಟ್ಟಿಕೋ.
4 ಸತ್ಯತೆ, ದೈನ್ಯ, ನೀತಿಗಳನ್ನು ಸ್ಥಾಪಿಸುವುದಕ್ಕಾಗಿ
ಸಕಲ ವೈಭವದೊಡನೆ ವಾಹನರೂಢನಾಗಿ,
ವಿಜಯೋತ್ಸವದೊಡನೆ ಹೊರಡು.
ನಿನ್ನ ಬಲಗೈ ಭಯಂಕರ ಕೃತ್ಯಗಳನ್ನು ನಡೆಸಲಿ.

5

ನಿನ್ನ ಬಾಣಗಳು ಮಹಾತೀಕ್ಷ್ಣವಾಗಿರುವವು;

ಅವು ರಾಜನ ಶತ್ರುಗಳ ಎದೆಯನ್ನು ಭೇದಿಸುವವು;
ಶತ್ರುಜನಾಂಗಗಳು ನಿನ್ನ ಪಾದದ ಕೆಳಗೆ ಬೀಳುವವು.
6 ದೇವರೇ, ನಿನ್ನ ಸಿಂಹಾಸನವು ಯುಗಯುಗಾಂತರಗಳಲ್ಲಿಯೂ ಇರುವುದು;
ನಿನ್ನ ರಾಜದಂಡವು ನ್ಯಾಯ ದಂಡವಾಗಿದೆ.
7 ನೀನು ಧರ್ಮವನ್ನು ಪ್ರೀತಿಸುತ್ತಿ, ಅಧರ್ಮವನ್ನು ದ್ವೇಷಿಸುತ್ತಿ;
ಆದುದರಿಂದ ದೇವರು, ನಿನ್ನ ದೇವರೇ, ನಿನ್ನನ್ನು ನಿನ್ನ ಜೊತೆಗಾರರಿಗಿಂತ,
ಉನ್ನತಸ್ಥಾನಕ್ಕೆ ಏರಿಸಿ, ಪರಮಾನಂದತೈಲದಿಂದ ಅಭಿಷೇಕಿಸಿದ್ದಾನೆ.

8

ನಿನ್ನ ವಸ್ತ್ರಗಳೆಲ್ಲಾ ರಕ್ತಬೋಳ, ದಾಲ್ಚಿನ್ನಿ, ಚಂದನಗಳಿಂದ

ಎಷ್ಟೋ ಸುವಾಸನೆಯುಳ್ಳವುಗಳಾಗಿವೆ;
ಗಜದಂತ ಅರಮನೆಗಳೊಳಗೆ ಉತ್ಕೃಷ್ಟವಾದ ವಾದ್ಯಗಳು ನಿನ್ನನ್ನು ಆನಂದಗೊಳಿಸುತ್ತವೆ.
9 ನಿನ್ನ ಸ್ತ್ರೀಪರಿವಾರದಲ್ಲಿ ರಾಜಕುಮಾರಿಯರೂ ಇದ್ದಾರೆ;
ಪಟ್ಟದ ರಾಣಿಯು ಓಫೀರ್ ದೇಶದ ಬಂಗಾರದ ಆಭರಣಗಳಿಂದ ಅಲಂಕೃತಳಾಗಿ,
ನಿನ್ನ ಬಲಭಾಗದಲ್ಲಿ ನಿಂತಿರುವಳು.

10

ಎಲೌ ರಾಜಕುಮಾರಿಯೇ, ನನ್ನ ಮಾತನ್ನು ಕೇಳಿ ಆಲೋಚಿಸು;

ಸ್ವಜನರನ್ನೂ ತೌರಮನೆಯನ್ನೂ ಮರೆತುಬಿಡು.
11 ಆಗ ರಾಜನು ನಿನ್ನ ಲಾವಣ್ಯವನ್ನು ನೋಡಲು ಅಪೇಕ್ಷಿಸುವನು.
ಆತನೇ ನಿನಗೆ ಒಡೆಯನು;
ಆತನನ್ನು ಗೌರವಿಸು.

12

ತೂರ್ ಸಂಸ್ಥಾನದವರು ಕಾಣಿಕೆಗಳೊಂದಿಗೆ ಬರುವರು;

ಪ್ರಜೆಗಳಲ್ಲಿ ಐಶ್ವರ್ಯವಂತರು ನಿನ್ನ ದಯೆಯನ್ನು ಕೋರುವರು.
13 ಅಂತಃಪುರದಲ್ಲಿ ರಾಜಕುಮಾರಿಯು ಎಷ್ಟೋ ವೈಭವದಿಂದಿದ್ದಾಳೆ;
ಆಕೆಯು ಜರತಾರಿಯ [ಚಿನ್ನದಿಂದ ನೇಯ್ದ] ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.

14

ಆಕೆಯು ಬೂಟೇದಾರಿ [ಕಸೂತಿಕೆಲಸದ] ವಸ್ತ್ರಗಳನ್ನು ಧರಿಸಿಕೊಂಡು,

ಅವಳ ಸೇವೆಗಾಗಿ ಕನ್ಯೆಯರಾದ ಸಖೀಯರು ಅವಳನ್ನು ಹಿಂಬಾಲಿಸಿ,
ಅರಸನ ಬಳಿಗೆ ಬರುವರು.
15 ಅವರು ಉಲ್ಲಾಸದಿಂದಲೂ, ಸಂತೋಷದಿಂದಲೂ ಬಂದು,
ಅರಮನೆಯೊಳಗೆ ಪ್ರವೇಶಿಸುವರು.

16

ನಿನ್ನ ಪಿತೃಗಳ ಸ್ಥಳಗಳಲ್ಲಿ ನಿನ್ನ ಮಕ್ಕಳು ಇರುವರು;

ನೀನು ಅವರನ್ನು ಭೂಮಿಯ ಮೇಲೆಲ್ಲಾ ಅಧಿಕಾರಿಗಳನ್ನಾಗಿ ನೇಮಿಸುವಿ.
17 ನಿನ್ನ ಹೆಸರು ತಲತಲಾಂತರಗಳಲ್ಲಿ ಜ್ಞಾಪಕವಿರುವಂತೆ ನಾನು ಮಾಡುವೆನು;
ಅದುದರಿಂದ ಎಲ್ಲಾ ಜನಗಳು ನಿನ್ನನ್ನು ಯುಗಯುಗಾಂತರಗಳಲ್ಲಿಯೂ ಪ್ರಶಂಸಿಸುವರು.

Copyright information for KanULB